Alva’s college ‘Autonomous’: Global Education- Local focus, Student centric, Community oriented- Corporate opportunity

ಆಳ್ವಾಸ್ ಕಾಲೇಜಿಗೆ ‘ಸ್ವಾಯತ್ತ’ ಗರಿ: ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ ಜಾರಿ

ಪ್ರಸ್ತುತ ಉದ್ಯಮ ಹಾಗೂ ಕೌಶಲ ಆಧರಿತ ಕೋರ್ಸುಗಳು ಜಾರಿ

ವಿದ್ಯಾಗಿರಿ: ಕಾಲೇಜುಗಳ ಸ್ವಾಯತ್ತ ಸ್ಥಾನಮಾನವು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದ್ದು, ಆಳ್ವಾಸ್ (ಸ್ವಾಯತ್ತ) ಕಾಲೇಜು ಪಠ್ಯಕ್ರಮ, ಉದ್ಯಮ ಹಾಗೂ ಕೌಶಲ ಆಧಾರಿತವಾಗಿ ವಿದ್ಯಾರ್ಥಿ ಹಾಗೂ ಸಾಮುದಾಯಿಕ ಅವಶ್ಯಕತೆಗೆ ತಕ್ಕಂತೆ ವಿಶಿಷ್ಟವಾಗಿ ತನ್ನ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಆಳ್ವಾಸ್ (ಸ್ವಾಯತ್ತ) ಕಾಲೇಜು ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು.
ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುಶಿಸ್ತೀಯ ಅಧ್ಯಯನ ಹೊಂದಿದ ಕಾಲೇಜುಗಳಿಗೆ ಸರ್ಕಾರ ಸ್ವಾಯತ್ತ ಸ್ಥಾನಮಾನ ನೀಡುತ್ತಿದೆ. ‘ಸ್ವಾಯತ್ತ’ ಎಂದರೆ ಕೇವಲ ಆಡಳಿತ ವ್ಯವಸ್ಥೆಯಲ್ಲಿ ಮಾತ್ರ ಬದಲಾವಣೆ ಅಲ್ಲ, ಅದು ಪಠ್ಯಕ್ರಮ ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಎಂದು ಅವರು ಬಣ್ಣಿಸಿದರು.
ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಶೈಕ್ಷಣಿಕ ಪಠ್ಯಕ್ರಮ ಆಧರಿತ ವ್ಯವಸ್ಥೆಯನ್ನು ರೂಪಿಸಿದ್ಹೇವೆ. ಇದರಿಂದ ಪದವಿ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಏಕಕಾಲದಲ್ಲಿ ಸಿದ್ಧರಾಗುತ್ತಾರೆ. ವಿದ್ಯಾರ್ಥಿಗಳ ತರಗತಿಯ ಸೈದ್ಧಾಂತಿಕ (ಥಿಯರಿ) ಕಲಿಕೆ ಜೊತೆ ಪ್ರಾಯೋಗಿಕ ಕಲಿಕೆ ಹೆಚ್ಚಿಸಿದ್ಹೇವೆ. ಅಂತರಶಿಸ್ತೀಯ ಅಧ್ಯಯನದ ಮೂಲಕ ಆನ್ವಯಿಕವಾಗಿ ಕಲಿಯುವ ಕಾರಣ ಮಾರುಕಟ್ಟೆಯಲ್ಲಿ ಔದ್ಯಮಿಕ ಹಾಗೂ ಔದ್ಯೋಗಿಕ ಅವಕಾಶ ಹೆಚ್ಚಲಿದೆ ಎಂದು ಮಾಹಿತಿ ನೀಡಿದರು.
ಶೈಕ್ಷಣಿಕ ಕಾಲಪಟ್ಟಿ (ಕ್ಯಾಲೆಂಡರ್), ಅತ್ಯಾಧುನಿಕ ಮಾದರಿಯ ಪರೀಕ್ಷಾ ವಿಧಾನವು ಶಿಕ್ಷಣ ವ್ಯವಸ್ಥೆಯಲ್ಲಿ ಸ್ಪಷ್ಟತೆ ತರುತ್ತದೆ. ಆಗ ಅತ್ಯುತ್ತಮ ಶಿಕ್ಷಣ ದೊರೆಯುತ್ತದೆ. ಇದು ನಮ್ಮಲ್ಲಿ ಅನುಷ್ಠಾನಗೊಂಡಿದೆ ಎಂದರು.
ಶಿಕ್ಷಣ, ಸಾಂಸ್ಕೃತಿಕ, ಕ್ರೀಡೆಯಲ್ಲಿ ಆಳ್ವಾಸ್ ಈಗಾಗಲೇ ಸಾಧನೆ ಮಾಡಿದ್ದು, ಇವುಗಳನ್ನು ಪಠ್ಯಕ್ರಮದ ಜೊತೆ ಜೋಡಿಸಿದ್ದು, ಸರ್ಟಿಫಿಕೇಟ್ ಕೋರ್ಸ್ ಪರಿಚಯಿಸಲಾಗಿದೆ. ಅವುಗಳ ಜೊತೆ ‘ಕಲಿಕೆ- ಗಳಿಕೆ’ ಕಾರ್ಯಕ್ರಮ ಜಾರಿಗೊಳಿಸಿದ್ದು, ಇನ್ಫೋಸಿಸ್, ಸ್ಟ್ರೈಕಾನ್ ಮತ್ತಿತರ ಕಂಪೆನಿಗಳ ಇಂಟರ್ನ್ಶಿಫ್ ಅನ್ನು ವಿದ್ಯಾರ್ಥಿಗಳು ಕಾಲೇಜಿನಲ್ಲಿಯೇ ಮಾಡುತ್ತಿದ್ದಾರೆ ಉದ್ಯೋಗ ಪಡೆಯಲು ಬೇಕಾದ ತರಬೇತಿ ನೀಡಲಾಗುತ್ತಿದೆ ಎಂದರು.
ವಿದ್ಯಾರ್ಥಿಗಳು ತಮ್ಮ ಗುರಿ ಈಡೇರಿಕೆಗೆ ಅನುಗುಣವಾಗಿ ಪದವಿ ಆಯ್ಕೆ ಮಾಡುವ ವಿಧಾನ ನಮ್ಮದಾಗಿದೆ. ಆಗ ಉದ್ದೇಶ ಆಧರಿತವಾಗಿ ಶಿಕ್ಷಣ ಪಡೆಯಲು ಸಾಧ್ಯ. ಅಂತರರಾಷ್ಟ್ರೀಯ ಬೇಡಿಕೆಯಿಂದ ಹಿಡಿದು ಸ್ಥಳೀಯ ಬೇಡಿಕೆಗೆ ಅನುಗುಣವಾಗಿ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸಿದ್ದೇವೆ ಎಂದು ವಿವರಿಸಿದರು.
ಪ್ರಮುಖ ಅಂಶಗಳು:
ಆಳ್ವಾಸ್ ಕಾಲೇಜಿನಲ್ಲಿ ಬಿಕಾಂ. ಪದವಿಯನ್ನು ಸಿಎ, ಸಿಎಸ್, ಎಸಿಸಿಎ, ಸಿಎಂಎ, ಸಿಪಿಎ ಜತೆಗೆ ಸಂಯೋಜಿತವಾಗಿ ಪಡೆದುಕೊಳ್ಳಬಹುದು. ಇದರೊಂದಿಗೆ ಕಂಪ್ಯೂಟರ್ ಅಪ್ಲಿಕೇಶನ್, ಟ್ಯಾಕ್ಸ್ ಪ್ರೊಸಿಜರ್, ಬ್ಯಾಂಕಿಂಗ್ ಹಾಗೂ ಇನ್ಸೂರೆನ್ಸ್, ಅಕೌಂಟ್ಸ್ ಹಾಗೂ ಫೈನಾನ್ಸ್, ಬ್ಯುಸಿನೆಸ್ ಡೇಟಾ ಅನಾಲಿಟಿಕ್ಸ್ ನಲ್ಲೂ ಬಿಕಾಂ. ಪದವಿ ಪಡೆಯಲು ಅವಕಾಶವಿದೆ.
ಬಿಸಿಎ ವಿಭಾಗದಲ್ಲಿ ಹೊಸದಾಗಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಮಷಿನ್ ಲರನ್ನಿಂಗ್, ಡೇಟಾ ಸೈನ್ಸ್ ಕೊರ್ಸುಗಳನ್ನು ಪರಿಚಯಿಸಲಾಗಿದೆ. ಪದವಿಯ ಬಳಿಕ ಉದ್ಯೋಗ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಉದ್ಯೋಗಾಧಾರಿತ ಕೊರ್ಸುಗಳಾದ ಫುಡ್ ಆಂಡ್ ನ್ಯೂಟ್ರಿಷನ್, ಅನಿಮೇಷನ್, ಹೋಟೆಲ್ ಮ್ಯಾನೇಜಜೈಂಟ್, ಫ್ಯಾಷನ್ ಡಿಸೈನಿಂಗ್, ಜರ್ನಲಿಸಂ, ಎವಿಯೇಷನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಪ್ರತಿ ಕೊರ್ಸುಗಳ ಸೆಮಿಸ್ಟರ್ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಇಂಟರ್ನ್ನಿಪ್ ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳ ಕೌಶಲ್ಯ ವೃದ್ಧಿಗೆ ಸುಮಾರು 30ಕ್ಕೂ ಅಧಿಕ ಘಟಕಗಳಿದ್ದು ಇದಕ್ಕಾಗಿಯೇ ಹೊಸ ಪಠ್ಯಕ್ರಮವನ್ನು ಪರಿಚಯಿಸಿದ್ದು, ಕೊನೆಯಲ್ಲಿ ಪರೀಕ್ಷೆ ನಡೆಸುವ ಮೂಲಕ ಸರ್ಟಿಫಿಕೆಟ್ ನೀಡಲಾಗುವುದು. ಸರ್ಟಿಫಿಕೇಟ್ ಕೋರ್ಸುಗಳ ಜತೆಗೆ ವಿದ್ಯಾರ್ಥಿಗಳು ಯಕ್ಷಗಾನ, ನಾಟಕ, ಭರತನಾಟ್ಯ, ಸಂಗೀತ ಹಾಗೂ ವಾದ್ಯಗಳಂತಹ ಲಲಿತ ಕಲೆಗಳನ್ನು ಕಲಿಯಲು ಅವಕಾಶವಿದೆ.
ಸ್ವಾಯತ್ತ ವ್ಯವಸ್ಥೆ ಮೂಲಕ ಕಾಲೇಜಿನಲ್ಲಿ ವಿದ್ಯಾರ್ಥಿಸ್ನೇಹಿ – ಪಾರದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಸರಳವಾಗಿ ಹಾಗೂ ವೇಗವಾಗಿ ಪರೀಕ್ಷೆಯ ಫಲಿತಾಂಶ ವಿದ್ಯಾರ್ಥಿಗಳನ್ನು ತಲುಪುತ್ತಿದೆ. ಡಿಜಿಟಲ್ ಮೌಲ್ಯಮಾಪನ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದ್ದು ವಿದ್ಯಾರ್ಥಿಗಳು ಫಲಿತಾಂಶದಲ್ಲಿ ಗೊಂದಲವಿದ್ದಾಗ ಉತ್ತರ ಪತ್ರಿಕೆಗಳನ್ನು ತಮ್ಮ ಮೊಬೈಲ್ ಗಳಲ್ಲಿಯೇ ಪರಿಶೀಲಿಸಬಹುದು.