ಆಳ್ವಾಸ್ ಮಹಿಳಾ ವೇದಿಕೆ ‘ಸಕ್ಷಮ’ ದಿಂದ ಮಹಿಳಾ ದಿನಾಚರಣೆ
ವಿದ್ಯಾಗಿರಿ (ಮೂಡುಬಿದಿರೆ): ‘ಮಹಿಳೆ ಇಲ್ಲದೇ ಪ್ರಕೃತಿ ಇಲ್ಲ. ‘ಶಕ್ತಿ’ ಇಲ್ಲದೆ ಶಿವನೂ ನಿಶ್ಶಕ್ತ. ಶೋಷಣೆ ಮೆಟ್ಟಿ ನಿಲ್ಲುವವಳೇ ನಿಜವಾದ ‘ಹೆಣ್ಣು’. ಹೆಣ್ಣಿಗೆ ವಿದ್ಯೆಯೇ ಸೌಂದರ್ಯ, ತೇಜಸ್ಸು’ ಎಂದು ಹಿರಿಯ ರಂಗಕರ್ಮಿ, ಬೆಳ್ಳಿತೆರೆ ಮಾತು ಕಿರುತೆರೆ ನಟಿ ಗಿರಿಜಾ ಲೋಕೇಶ್ ಹೇಳಿದರು.
ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣ (ಕೃಷಿ ಸಿರಿ) ವೇದಿಕೆಯಲ್ಲಿ ಶನಿವಾರ (ಮಾರ್ಚ್ 8) ಆಳ್ವಾಸ್ ಮಹಿಳಾ ವೇದಿಕೆ ‘ಸಕ್ಷಮ’ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡರ ಸ್ಮರಣೆಯಲ್ಲಿ ಆಯೋಜಿಸಿದ ‘ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ -2025’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಹಿಳೆ ಇಲ್ಲದೇ ಪ್ರಕೃತಿಯ ಇಲ್ಲ. ಆದರೆ ಹಿಂದೆ ಪುರಷನೂ ಬೇಕು ಎಂಬುದು ಗುಟ್ಟು’ ಎಂದು ನಸುನಕ್ಕ ಅವರು, ‘ವಿದ್ಯೆ- ವಿನಯ ಇಲ್ಲದವರಿಗೆ ಮೇಕಪ್ ಹೆಚ್ಚು ಬೇಕು’ ಎಂದು ಚಟಾಕಿ ಹಾರಿಸಿದರು.
‘ಅಮ್ಮ ಹೊಡೆದು ತಿದ್ದಿ ತೀಡಿದಾಗ ಗೊತ್ತಾ ಗಲಿಲ್ಲ. ಈಗ ಅದರ ಫಲ ಅನುಭವಿಸುತ್ತಿದ್ದೇನೆ. ಅಮ್ಮನ ಋಣ ಹೇಗೆ ತೀರಿಸಲಿ’ ಎಂದು ಭಾವುಕರಾದರು
‘ಆಳ್ವಾಸ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ನನ್ನ ಬಹುದಿನದ ಕನಸು. ಕರೆದುದಕ್ಕೆ ಧನ್ಯವಾದ ಎಂದು ಗ್ರೀಷ್ಮಾ ಆಳ್ವ ಅವರಿಗೆ ಹೇಳಿದರು.
‘ಅಳ್ವಾಸ್ ಆವರಣದ ಶಿಸ್ತು ಮತ್ತು ನೈರ್ಮಲ್ಯ ದೇಶಕ್ಕೆ ಮಾದರಿ. ಹೀಗಾಗಿ ಇಲ್ಲಿ ಕಲಿತರೆ ದೇಶದ ಉತ್ತಮ ಪ್ರಜೆ ಆಗುವ ಅವಕಾಶ ಮಕ್ಕಳಿಗೆ ಲಭಿಸುತ್ತದೆ. ಆಳ್ವಾಸ್ ನಲ್ಲಿ ಓದುವುದು ದೊಡ್ಡ ಹೆಮ್ಮೆ’ ಎಂದ ಅವರು, ‘ಡಾ. ಮೋಹನ ಆಳ್ವರಿಗೂ ನಮಗೂ 50 ವರ್ಷಗಳ ನಂಟು. ಆದರೆ ವಯಸ್ಸಾಗಲಿಲ್ಲ. ಏಕೆಂದರೆ ಅವರ ಸಾಮಾಜಿಕ ಕೊಡುಗೆ ಅಪಾರ’ ಎಂದು ಶ್ಲಾಘಿಸಿದರು.
‘ನೀವು ಗ್ರಾಮೀಣ ಮಹಿಳೆ ಸುಕ್ರಿ ಬೊಮ್ಮನಗೌಡ ಅವರಿಗೆ ನೀಡಿದ ಗೌರವ ಶ್ಲಾಘನೀಯ. ಇಂದಿನ ‘ಸಿ’ ಶಸ್ತ್ರಚಿಕಿತ್ಸೆ ಹೆರಿಗೆಯ ನಡುವೆ ಸೂಲಗಿತ್ತಿಯರು ಅಂದು ನಿರ್ವಹಿಸಿದ ಪಾತ್ರ ಬಹುಮುಖ್ಯ. ಅದೇ ರೀತಿ ಸಾಲುಮರ ತಿಮ್ಮಕ್ಕ ಅವರ ಸಾಧನೆ’ ಎಂದು ಕೊಂಡಾಡಿದರು.
‘ನಾಳೆ ಎಲ್ಲ ನಮ್ಮದೂ’ ಎಂದು ವಿದ್ಯಾರ್ಥಿಗಳಿಗೆ ಹಾಡುವ ಮೂಲಕ ಮಹಿಳಾ ದಿನಾಚರಣೆಯ ಶುಭ ಕೋರಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, ‘ಸಮಾನತೆಗಾಗಿ ಪ್ರಯತ್ನ ವೇಗಗೊಳಿಸಿ’ ಎಂಬ ಧ್ಯೇಯ ವಾಕ್ಯ ಘೋಷಿಸಿದರು.
ರಿಸರ್ಚ್ ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ ನಿರ್ದೇಶಕಿ ಪ್ರೊ. ಸ್ಮಿತಾ ಹೆಗ್ಡೆ, ಮಂಗಳೂರು ಪೊಲೀಸ್ ಸಂಚಾರ ವಿಭಾಗದ ಸಹಾಯಕ ಪೋಲಿಸ್ ಆಯುಕ್ತೆ (ಎಸಿಪಿ) ನಜ್ಮಾ ಫಾರೂಕಿ, ಎಸ್- ವ್ಯಾಸ (ಪರಿಗಣಿತ) ವಿಶ್ವವಿದ್ಯಾಲಯದ ಯೋಗ ಮತ್ತು ಮಾನವಿಕ ಅಧ್ಯಯನಗಳ ಡೀನ್ ಪ್ರೊ. ಕರುಣಾ ವಿಜಯೇಂದ್ರ, ಪ್ರಮುಖರಾದ ಜಯಶ್ರೀ ಕೆ. ಅಮರನಾಥ ಶೆಟ್ಟಿ, ಆಳ್ವಾಸ್ ಫಾರ್ಮಸಿ ಆಡಳಿತಾಧಿಕಾರಿ ಡಾ.ಗ್ರೀಷ್ಮಾ ಆಳ್ವ ಇದ್ದರು.
ಪಾಕಪ್ರವೀಣೆ ದಿವ್ಯಾ ಡಿಸೋಜ, ಮೌಲ್ಯ ಶಿಕ್ಷಣ ಬೋಧನೆಯ ಮೀನಾಕ್ಷಿ ಮತ್ತು ಸಾಧಕಿ ಬಾಲಕಿ ಮರಿಯಂ ಅಫ್ನಾ ಅವರನ್ನು ಗೌರವಿಸಲಾಯಿತು.
ಅತಿಥಿಗಳನ್ನು ಸಾಂಸ್ಕೃತಿಕ ಕಲಾತಂಡಗಳು, ಸಾಧಕಿಯರ ವೇಷಭೂಷಣಧಾರಿ ಮಕ್ಕಳು ಸೇರಿದಂತೆ ವಿಜೃಂಭಣೆಯಿಂದ ವೇದಿಕೆಗೆ ಕರೆದು ಕೊಂಡು ಬರಲಾಯಿತು. ಪ್ರಾಧ್ಯಾಪಕಿ ಡಾ.ಮೂಕಾಂಬಿಕಾ ವಾರ್ಷಿಕ ವರದಿ ವಾಚಿಸಿದರು. ಡಾ.ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.