ವಿಶ್ವ ಯೂನಿವರ್ಸಿಟಿ ಗೇಮ್ಸ್’ ಗೆ ಆಳ್ವಾಸ್‌ನ 11 ಕ್ರೀಡಾಪಟುಗಳು
ವಿಶ್ವ ಯೂನಿವರ್ಸಿಟಿ ಗೇಮ್ಸ್: ಆಳ್ವಾಸ್ ನ 32 ಕ್ರೀಡಾಪಟುಗಳು ಭಾಗವಹಿಸಿದ ಹಿರಿಮೆ
ವಿದ್ಯಾಗಿರಿ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ। ಎಂ.ಮೋಹನ ಆಳ್ವ ಅವರ ಮಹತ್ವಾಕಾಂಕ್ಷಿ ‘ಕ್ರೀಡಾ ದತ್ತು ಯೋಜನೆ’ಯ 11 ಕ್ರೀಡಾಪಟುಗಳು ಜರ್ಮನಿಯ ರಿಯಾನ್-ರೋಹೂರ್‌ನಲ್ಲಿ ಜುಲೈ 16ರಿಂದ 27ರ ವರೆಗೆ ನಡೆಯಲಿರುವ ‘ ವಿಶ್ವ ಯೂನಿವರ್ಸಿಟಿ ಗೇಮ್ಸ್ -2025’ರಲ್ಲಿ ಪಾಲ್ಗೊಳ್ಳಲಿದ್ದು, ಇದರೊಂದಿಗೆ ಈ ವರೆಗೆ 32 ಕ್ರೀಡಾಪಟುಗಳು ಆಯ್ಕೆಯಾದ ಶ್ರೇಯಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪಾತ್ರವಾಗಿದೆ.
ಪುರುಷರ ವಿಭಾಗದಲ್ಲಿ ಗಗನ್ (5000 ಮೀಟರ್ಸ್ ಓಟ), ಸಚಿನ್ (20 ಕಿ.ಮೀ ನಡಿಗೆ), ಬಾಲಕೃಷ್ಣ (400 ಮೀ ಓಟ), ತೌಫಿಕ್ ಎನ್ (ಡೆಕತ್ಲಾನ್) ಹಾಗೂ ಮಹಿಳಾ ವಿಭಾಗದಲ್ಲಿ ದೀಕ್ಷಿತಾ (400 ಮೀ ಹರ್ಡಲ್ಸ್), ಬಸಂತಿ ಕುಮಾರಿ (ಹಾಫ್ ಮ್ಯಾರಥಾನ್), ಮಂಜು ಯಾದವ್(ಸ್ಟೀಪಲ್ ಚೇಸ್), ಸಿಂಧುಶ್ರೀ(ಪೋಲ್ ವಾಲ್ಟ್ ), ಸಾಕ್ಷಿ( ಜಾವೆಲಿನ್), ಜ್ಯೋತಿ (ಹಾಫ್ ಮ್ಯಾರಥಾನ್) ಮತ್ತು ಶಾಲಿನಿ (20 ಕಿಮೀ ನಡಿಗೆ) ಪಾಲ್ಗೊಳ್ಳಲಿದ್ದಾರೆ. ಈ ಕ್ರೀಡಾಪಟುಗಳು ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.
2015ರಲ್ಲಿ ಕ್ರೊವೇಶಿಯಾದಲ್ಲಿ ಒಬ್ಬರು, 2017ರಲ್ಲಿ ತೈವಾನ್ ನಲ್ಲಿ ಇಬ್ಬರು, 2019ರಲ್ಲಿ ಇಟಲಿಯಲ್ಲಿ 10 ಜನ, 2023ರಲ್ಲಿ ಚೀನಾದಲ್ಲಿ 8 ಜನ ಪಾಲ್ಗೊಂಡಿದ್ದರು. ಈಬಾರಿ ಪ್ರತಿ ಕ್ರೀಡಾಪಟುವಿಗೆ ರೂ. 2,50,000 ಹಣಕಾಸಿನ ವ್ಯವಸ್ಥೆ ಅಗತ್ಯವಿದ್ದು, ಮಂಗಳೂರು ವಿಶ್ವವಿದ್ಯಾನಿಲಯ ತಲಾ ರೂ. 75,000 ಮೊತ್ತವನ್ನು ನೀಡುವ ಭರವಸೆಯನ್ನು ನೀಡಿದ್ದು, ಉಳಿದ ಮೊತ್ತವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯು ಭರಿಸುತ್ತಿದೆ.
ವಿವಿಧ ಕ್ರೀಡೆಗಳಲ್ಲಿ ಸಾಧನೆ: ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಮಂಗಳೂರು ವಿ.ವಿ. ಯನ್ನು ಪ್ರತಿನಿಧಿಸಿದ ಆಳ್ವಾಸ್ ಶಿಕ್ಷಣ ಪ್ರತಿಸ್ಥಾನ (ರಿ.)ದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಕ್ರಾಸ್ ಕಂಟ್ರಿ ಚಾಂಪಿಯನ್‌ಶಿಪ್ -2024 ರಲ್ಲಿ ಮಹಿಳಾ ಮತ್ತು ಪುರುಷರ ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಆಗಿದ್ದು, ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅಥ್ಲೆಟಿಕ್ಸ್ ನಲ್ಲಿ ಮಹಿಳಾ ಮತ್ತು ಪುರುಷರ ಎರಡೂ ವಿಭಾಗಗಳಲ್ಲಿ ಚಾಂಪಿಯನ್ ಆಗಿದ್ದು, ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಪುರುಷರ ಖೋ ಖೋದಲ್ಲಿ ಚಾಂಪಿಯನ್ ಆಗಿದ್ದಾರೆ. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಅತ್ಯುತ್ತಮ ದೇಹದಾರ್ಢ್ಯ ಪ್ರಶಸ್ತಿಯನ್ನು ಆಳ್ವಾಸ್ ನ ಕಿಶನ್ ಪಡೆದುಕೊಂಡಿದ್ದಾನೆ. ಪುರುಷರ ವೇಟ್‌ಲಿಫ್ಟಿಂಗ್ ಮತ್ತು ಮಹಿಳೆಯರ ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ರನ್ನರ್ ಅಫ್ ಆಗಿದ್ದಾರೆ.
ಹಲವು ದಾಖಲೆ: ಒಂದೇ ಶಿಕ್ಷಣ ಸಂಸ್ಥೆಯ 9 ಕ್ರೀಡಾಪಟುಗಳು ಒಲಿಂಪಿಕ್ಸ್ ಗಳಲ್ಲಿ 11 ಬಾರಿ ಭಾರತವನ್ನು ಪ್ರತಿನಿಧಿಸಿದ ಹಾಗೂ ಒಂದು ವಿಶ್ವವಿದ್ಯಾಲಯದ ಎಲ್ಲ 46 ದಾಖಲೆಗಳನ್ನು ಒಂದೇ ಶಿಕ್ಷಣ ಸಂಸ್ಥೆ ಬರೆದ ದಾಖಲೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಭಾಜನವಾಗಿದೆ.