ಮೂಡುಬಿದಿರೆ: ಪಾಚಿ ಗಿಡಗಳು ಅಥವಾ ಕಲ್ಲುಹೂವುಗಳು ಅನೇಕ ಔಷಧೀಯ ಮತ್ತು ವಾಣಿಜ್ಯೋದ್ಯಮಗಳಲ್ಲಿ ವ್ಯಾಪಕ ಬಳಕೆಯಿದ್ದರೂ ಇದರ ಸಂರಕ್ಷಣೆಗೆ ಕನಿಷ್ಠ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ ಇದರಿಂದಾಗಿ ಕಲ್ಲುಹೂವುಗಳ ಕುರಿತಾದ ಸಂಶೋಧನೆ ಹೆಚ್ಚಾಗಿ ಕಂಡುಬರುತ್ತಿಲ್ಲ ಎಂದು ಲಕ್ನೋದ ಸಿಎಸ್‍ಐಆರ್ ನ ವಿಜ್ಞಾನಿ ಡಾ. ದಲೀಪ್ ಕುಮಾರ್ ಉಪ್ರೇತಿ ಹೇಳಿದರು.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಕಾಲೇಜಿನ ಸಸ್ಯಶಾಸ್ತ್ರ ವಿಭಾಗ ಮತ್ತು ಲಕ್ನೋದ ನ್ಯಾಶನಲ್ ಬೊಟಾನಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಇದರ ಜಂಟಿ ಆಶ್ರಯದಲ್ಲಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಪಶ್ಚಿಮ ಘಟ್ಟಗಳಲ್ಲಿರುವ ಕಲ್ಲುಹೂವುಗಳ ಜೀವವೈವಿದ್ಯತೆ ಮತ್ತು ಪ್ರಾಮುಖ್ಯತೆ ಕುರಿತಾದ ಅರಿವು ಮೂಡಿಸುವ ಕಾರ್ಯಗಾರದಲ್ಲಿ ಮಾತನಾಡಿದ ಅವರು ಪಶ್ಚಿಮ ಘಟ್ಟಗಳಲ್ಲಿನ ಸಸ್ಯ ಸಾಮ್ರಾಜ್ಯವು ಭವಿಷ್ಯದ ಪ್ರಬಲ ಔಷಧ ಮೂಲಗಳು. ಇಲ್ಲಿ ಕಲ್ಲುಹೂವುಗಳ ಹಲವಾರು ವೈವಿದ್ಯತೆಗಳಿವೆ. ಇದರ ಕುರಿತಾದ ಸಂಶೋಧನೆಗಳು ನಡೆಯುತ್ತಿದ್ದರೂ ಸಂರಕ್ಷಣೆಯ ಕೊರತೆಯಿಂದಾಗಿ ಇವುಗಳ ಅರಿವು ಸಸ್ಯಶಾಸ್ತ್ರೀಯ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿದೆ. ಆದ್ದರಿಂದ ಇದರ ತಿಳುವಳಿಕೆ ಮುಖ್ಯವೆಂದು ಹೇಳಿದರು.
ಸಿಎಸ್‍ಐಆರ್ ನ ಸಸ್ಯವಿಜ್ಞಾನಿ ಡಾ. ಸಂಜೀವ ನಾಯಕ ಮಾತನಾಡಿ, ಪ್ರಕೃತಿಯಲ್ಲಿನ ಅತಿ ಸೂಕ್ಷ್ಮ ಜೀವಿಗಳ ಸಂರಕ್ಷಣೆಯೂ ಬಹಳ ಅಗತ್ಯ ಕಾರಣ ಅವುಗಳಿಗೆ ಮಾಲಿನ್ಯವನ್ನು ಎದುರಿಸುವ ಶಕ್ತಿ ಕಡಿಮೆಯಿರುತ್ತವೆ. ಆದ್ದರಿಂದ ಕಲ್ಲುಹೂವುಗಳಂಹ ಸಸ್ಯಗಳು ವೇದ ಕಾಲದಿಂದಲೂ ಪ್ರಚಲಿತದಲ್ಲಿವೆ. ಇದರ ಅದ್ಯಯನ ನಡೆಸಲು ಅನೇಕ ಪ್ರಯೋಗಾಲಯಗಳು ಇವೆ. ವಿದ್ಯಾರ್ಥಿಗಳು ಇಂತಹ ಕೇಂದ್ರಗಳ ಪ್ರವೇಶ ಪರೀಕ್ಷೆಗಳಲ್ಲಿ ಭಾಗವಹಿಸಬೇಕೆಂದು ಹೇಳಿದರು.
ಕಾರ್ಯಗಾರವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟೀ ವಿವೇಕ್ ಆಳ್ವ, ಪ್ರಾಂಶುಪಾಲರಾದ ಡಾ. ಕುರಿಯನ್ ಹಾಗೂ ಕಾರ್ಯಗಾರದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ರಮ್ಯಾ ರೈ ಪಿ. ಡಿಸ್ವಾಗತಿಸಿ, ವಿದ್ಯಾರ್ಥಿನಿ ಅಯಾನ ಜೋಸೆಫ್ ನಿರೂಪಿಸಿದರು.