‘ಮನುಕುಲದ ಉದ್ಧಾರಕ್ಕಾಗಿ ಜೀವವೈವಿಧ್ಯ’

 

ಮೂಡಬಿದಿರೆ: “ನಾವು ಇಂದು ಈ ಭೂಮಿ ಮೇಲೆ ಬದುಕುತ್ತಿದ್ದೇವೆ ಎಂದರೆ, ಅದಕ್ಕೆ ಜೀವವೈವಿಧ್ಯವೇ ಕಾರಣ. ಅವುಗಳನ್ನು ನಾಶಪಡಿಸಿದರೆ, ನಮ್ಮ ವಿನಾಶ ಕಟ್ಟಿಟ್ಟಬುತ್ತಿ” ಎಂದು ಡಾ. ಎಂ. ಮೋಹನ್ ಆಳ್ವ ಎಚ್ಚರಿಕೆಯ ನುಡಿಗಳನ್ನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ ಹಾಗೂ ಭಾರತೀಯ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ `ಮನುಕುಲದ ಉದ್ಧಾರಕ್ಕಾಗಿ ಜೀವವೈವಿಧ್ಯ’ ಎಂಬ ವಿಷಯದ ಮೇಲೆ ನಡೆಯುತ್ತಿರುವ ಎರಡು ದಿನಗಳ ಉಪನ್ಯಾಸ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಭೂಮಿ ನಮ್ಮ ಸೌರಮಂಡಲದಲ್ಲೇ ವಿಶಿಷ್ಟ ಗ್ರಹ. ಯಾವ ಗ್ರಹದಲ್ಲೂ ಕಾಣಸಿಗಂದಂಥಹ ಜೀವವೈವಿಧ್ಯಗಳನ್ನು ನಾವಿಲ್ಲಿ ನೋಡಬಹುದು. ಅಲ್ಲದೇ ಜೀವಿಸುವುದಕ್ಕೆ ಪೂರಕ ವಾತಾವರಣ ಹೊಂದಿರುವ ಏಕೈಕ ಗ್ರಹವೂ ಹೌದು. ಈ ಜೀವವೈವಿಧ್ಯಗಳೇ ನಮ್ಮ ಸೃಷ್ಟಿಯ ಮೂಲ ಹಾಗೂ ನಮ್ಮ ಉಸಿರಿನ ತ್ರಾಣವಾಗಿದೆ” ಎಂದು ತಿಳಿಸಿದರು.

 

 

“ಇಂದು ತಂತ್ರಜ್ಞಾನದ ಬೆಳವಣಿಗೆಯಿಂದ ಪರಿಸರ ನಾಶ ಹೊಂದುತ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಜೀವವೈವಿಧ್ಯಗಳ ಅಳಿವಿಗೆ ಕಾರಣನಾಗುತ್ತಿದ್ದಾನೆ. ಇದು ಹೀಗೆ ಮುಂದುವರೆದಲ್ಲಿ ನಮ್ಮ ವಿನಾಶ ಖಚಿತ” ಎಂದು ಹೇಳಿದರು.

“ನಾವು ಕೇವಲ ಪರಿಸರ ಪರ ಭಾಷಣಗಳನ್ನು ಕೇಳುವುದು, ಅಷ್ಟಕ್ಕೆ ಸುಮ್ಮನಾಗುವ ಕೆಲಸದಲ್ಲಿ ನಿರತರಾಗಿದ್ದೇವೆ. ನಾವು ಕೇಳಿದ್ದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ ಜೀವವೈವಿಧ್ಯಗಳ ವಿಚಾರದಲ್ಲಿ ಹೀಗಾದರೆ, ಅದು ನಮಗೆ ಮಾರಕ. ಹಾಗಾಗಿ ಅದರ ಉಳಿವಿಗೆ ನಾವೆಲ್ಲರೂ ಶ್ರಮಿಸಬೇಕು. ಜತೆಗೆ ಜೀವವೈವಿಧ್ಯಗಳನ್ನು ಗೌರವಿಸಿ, ಅದನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು” ಎಂದು ಸ್ಪೂರ್ತಿಯ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇನ್ಸಾದ ಹಿರಿಯ ವಿಜ್ಞಾನಿ ಡಾ. ಆರ್. ಆರ್. ರವಿ ಮಾತನಾಡಿ “ಜೀವವೈವಿಧ್ಯಗಳ ಬಗ್ಗೆ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಒದಗಿಸಲು ಭಾರತೀಯ ವಿಜ್ಞಾನ ಕೇಂದ್ರ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ವಿದ್ಯಾರ್ಥಿಗಳಿಗಾಗಿ ಕಾರ್ಯಾಗಾರ, ಉಪನ್ಯಾಸಕರಿಗಾಗಿ ರಿಫ್ರೆಶರ್‍ಸ್ ಹಾಗೂ ಬೇಸಿಗೆ ಸಮಯದಲ್ಲಿ ಎರಡು ತಿಂಗಳ ಸಮ್ಮರ್ ಫೆಲೋಶಿಪ್ ಆ ಕಾರ್ಯಕ್ರಮಗಳಾಗಿವೆ. ಇವುಗಳ ಮೂಲಕ ಯುವ ಜನತೆಯಲ್ಲಿ ಜೀವವೈವಿಧ್ಯಗಳ ಕುರಿತು ಕುತೂಹಲವನ್ನು ಸೃಷ್ಟಿಸುವ ಹಾಗೂ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ” ಎಂದು ಮಾಹಿತಿ ನೀಡಿದರು.

“ಇನ್ಸಾನ ಕಾರ್ಯಕ್ರಮಗಳು ಬಹಳ ವಿಶೇಷವಾಗಿದ್ದು, ಆಸಕ್ತರಿಗೆ ಸೈಂಧಾಂತಿಕ ಹಾಗೂ ಪ್ರಾಯೋಗಿಕ ರೀತಿಯ ಕಲಿಕೆಗೆ ಪ್ರಾಶಸ್ತ್ಯ ನೀಡಲಾಗುತ್ತದೆ. ಕಾರ್ಯಾಗಾರಗಳಲ್ಲಿ ವಿಜ್ಞಾನಿಗಳ ಜತೆ ನೇರ ಸಂದರ್ಶನ ಮಾಡಬಹುದು. ಅಲ್ಲದೇ ಫೆಲೋಶಿಪ್ ಕಾರ್ಯಕ್ರಮದಲ್ಲಿ ತಮ್ಮ ನೆಚ್ಚಿನ ವಿಜ್ಞಾನಿಯಡಿಯಲ್ಲಿ ಕಲಿಯಬಹುದು” ಎಂದು ತಿಳಿಸಿದರು.

“ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎರಡು ವಿಷಯಗಳಿಗೆ ನಾನು ಸಂಪೂರ್ಣವಾಗಿ ಮನಸೋತಿದ್ದೇನೆ. ಒಂದು ಇಲ್ಲಿರುವ ಶಿಸ್ತು. ಮತ್ತೊಂದು ಸಮಯದ ಮೌಲ್ಯ. ಇಷ್ಟು ವರ್ಷಗಳ ಕಾಲ ಅದನ್ನು ಹಾಗೇ ಉಳಿಸಿಕೊಂಡು ಬಂದಿವುದು ಶ್ಲಾಘನೀಯ” ಎಂದು ಸಂತಸ ವ್ಯಕ್ತಪಡಿಸಿದರು.

ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಾಗಾರದಲ್ಲಿ ಜೀವವೈವಿಧ್ಯತೆಯ ಕುರಿತಾದ ೮ ಉಪನ್ಯಾಸಗಳು ನಡೆಯಲಿವೆ. ಎಸ್‌ಡಿಎಮ್, ಮಂಗಳೂರು ವಿಶ್ವವಿದ್ಯಾಲಯದ ೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದಾರೆ.

ಇನ್ಸಾದ ಹಿರಿಯ ವಿಜ್ಞಾನಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಡಾ. ಸುಂದರೇಶನ್ ಹಾಗೂ ಡಾ. ಸಂಜಪ್ಪ, ಕಾರ್‍ಯಕ್ರಮದ ಸಂಯೋಜಕ ಡಾ ರಾಘವೇಂದ್ರ ರಾವ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರಶ್ಮಿ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ ಕುರಿಯನ್ ಸ್ವಾಗತ ಕೋರಿದರು. ಸ್ನಾತಕೋತ್ತರ ಬಯೋಟಕ್ನಾಲಜಿ ವಿಭಾಗದ ಸಹ ಪ್ರಾಧ್ಯಪಕಿ ಡಾ.ಜನೀಟಾ ವಂದಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.