ಅರ್ಥಪೂರ್ಣ ಯಶಸ್ವಿ ಕಾವ್ಯಗಳ ರಚನೆಗೆ ಬೇಂದ್ರೆ ನಡೆ ಅಗತ್ಯ

 

ವಿದ್ಯಾಗಿರಿ: ಬೇಂದ್ರೆಯವರ ಚಿಂತನೆಗಳು ಸರ್ವಕಾಲಕ್ಕೂ ಅನ್ವಯವಾಗುವಂತಹದು. ಇವರ ಬದುಕು ಬೇರೆಯಲ್ಲ, ಕಾವ್ಯ ಬೇರೆಯಲ್ಲ. ಒಲವೇ ನಮ್ಮ ಬದುಕು ಎಂಬ ನುಡಿಯು ಇವರ ಸಮಗ್ರ ಕಾವ್ಯಗಳಿಗೆ ಅನ್ವಯಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿ ಡಾ. ನಾಗಪ್ಪ ಗೌಡ ಆರ್ ತಿಳಿಸಿದರು.

ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬೇಂದ್ರೆ ಟ್ರಸ್ಟ್ ಧಾರವಾಡ ಮತ್ತು ಮೂಡುಬಿದಿರೆ ಆಳ್ವಾಸ್ ಕಾಲೇಜು ಕನ್ನಡ ವಿಭಾಗ ಐ.ಕ್ಯೂ.ಎ.ಸಿಯ ಜಂಟಿ ಆಶ್ರಯದಲ್ಲಿ ನಡೆದ “ಬೇಂದ್ರೆ ಕಾವ್ಯ ಕಮ್ಮಟ”ವನ್ನು ಉದ್ಘಾಟಿಸಿ ಮಾತನಾಡಿದರು.

ಬೇಂದ್ರೆಯವರು ಜನ ಕವಿಯಾಗಿ, ಆಡು ನುಡಿಯನ್ನು ಕಾವ್ಯ ನುಡಿಯನ್ನಾಗಿಸಿ  ಅರ್ಥಪೂರ್ಣವಾದ ಯಶಸ್ವಿ ಕಾವ್ಯಗಳನ್ನು ನೀಡಿದ್ದಾರೆ. ಬದುಕಿನ ಅರ್ಥವನ್ನು ಕವಿತೆಯ ರೂಪದಲ್ಲಿ ಮನುಕುಲಕ್ಕೆ ಅನ್ವಯಿಸುವಂತೆ ರಚಿಸಿದ್ದಾರೆ.  ಪ್ರಸ್ತುತ ಕಾಲಘಟ್ಟದಲ್ಲಿ ಹಣ ಮತ್ತು ಅಧಿಕಾರಗಳು ಜೀವನದ ಮೂಲ ಗುರಿಯಾಗಿದ್ದು, ಒಲವು ಮತ್ತು ಸೌಹಾರ್ದತೆಗಳು ತನ್ನ ಮೌಲ್ಯವನ್ನು  ಕಳೆದುಕೊಳ್ಳುತ್ತಿದೆ. ಬದುಕನ್ನು ನೋಡುವ ದೃಷ್ಟಿ ಬದಲಾಗಿಸಿ, ಧನಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ನಗುವನ್ನು ಕಳೆದುಕೊಂಡು ಆತಂಕದಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿದರು.ಹಿರಿಯ ಸಾಹಿತಿ ಶ್ಯಾಮಸುಂದರ ಬಿದಿರಕುಂದಿ ಮಾತನಾಡಿ ಬೇಂದ್ರೆಯವರ ಕವಿತೆಗಳಲ್ಲಿ ಮನೋರಂಜನೆಯ ಜೊತೆಗೆ ಜೀವನದ ಕಟು ಸತ್ಯಗಳನ್ನು ತಿಳಿಸಿದ್ದಾರೆ. ವಿದ್ಯಾರ್ಥಿಯಾಗಿದ್ದಾಗಲೇ ಹುಟ್ಟೂರಿಗೆ ಹೋಗಿ ಕಾವ್ಯೋದ್ಯೋಗ ಮಾಡಿ ಯಶಸ್ವಿಯಾದವರು ಬೇಂದ್ರೆಯವರು ಎಂದು  ತಿಳಿಸಿದರು.

ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಕವಿತೆಯನ್ನು ಅನುಭವಿಸುವ ಸಾಮರ್ಥ್ಯವಿದ್ದರೆ ಮಾತ್ರ ಅದರ ಭಾವನೆಯನ್ನು ಅರ್ಥೈಸಿಕೊಳ್ಳಬಹುದು. ಯಾವುದೇ ನೋಟದ ವೈಶಿಷ್ಟ್ಯವನ್ನು ಅರಿಯಲು ಸಾಹಿತ್ಯದ ಜ್ಞಾನವಿರಬೇಕು. ಬೇಂದ್ರೆಯವರ ಕಾವ್ಯವು ಅವರಲ್ಲಿರುವ ಸಾಹಿತ್ಯಾಸಕ್ತಿ ಮತ್ತು ಕನ್ನಡಾಭಿಮಾನವನ್ನು ತಿಳಿಸುತ್ತದೆ. ಯಾವುದೇ ಕಾವ್ಯವನ್ನು ಅರಗಿಸಿಕೊಳ್ಳಲು ಬೇಂದ್ರೆ ಮತ್ತು ಕುವೆಂಪು ಅವರನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರಂಗಭೂಮಿ ಮತ್ತು ಕಿರುತೆರೆಯ ಕಲಾವಿದ ಅನಂತ ದೇಶಪಾಂಡೆ ಬೇಂದ್ರೆಯವರ ಬದುಕಿನ ಚಿತ್ರಣವನ್ನು ಅಭಿನಯಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ  ಪ್ರೊ. ಚಂದ್ರಶೇಖರ ಗೌಡ ಸ್ವಾಗತಿಸಿ, ವಿದ್ಯಾರ್ಥಿನಿ ಪ್ರಗತಿ ವಂದಿಸಿ, ದಿಶಾ ಶೆಟ್ಟಿ ನಿರೂಪಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.