ಪೋಷಕರ ಪ್ರೀತಿ ಮಕ್ಕಳ ಭವಿಷ್ಯವನ್ನು ನಿರ್ಧರಿಸುವಂತಿರಬೇಕು: ಪ್ರೋ ಪ್ರಕಾಶ್ ಶೆಟ್ಟಿ

ಮೂಡಬಿದಿರೆ: ಮಕ್ಕಳು  ಕೇಳಿದ ಎಲ್ಲ ವಸ್ತುವನ್ನು ಪೋಷಕರು ನೀಡಿದರೆ ಅದು ಮಕ್ಕಳನ್ನು ಪೋಷಿಸಿದಂತಲ್ಲ. ಮಕ್ಕಳನ್ನು ವಿನಯಶೀಲರಾಗಿ ಬೆಳೆಸುವುದು ಪೋಷಕರ ಮುಖ್ಯ ಕರ್ತವ್ಯ ಎಂದು ಆಳ್ವಾಸ್ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಆಡಳಿತ ಅಧಿಕಾರಿ ಪ್ರೋ ಪ್ರಕಾಶ್ ಶೆಟ್ಟಿ ಹೇಳಿದರು.

ಆಳ್ವಾಸ್ ಕಾಲೇಜಿನ ವಾಣಿಜ್ಯ ವಿಭಾಗದಿಂದ ಆಯೋಜಿಸಲಾಗಿದ್ದ ಶಿಕ್ಷಕ-ರಕ್ಷಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಬಾಲ್ಯದಲ್ಲಿಯೇ ಶಿಕ್ಷಣಕ್ಕಾಗಿ ಮನೆಯಿಂದ ಹೊರ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಕುಟುಂಬ ಪದ್ದತಿಯ ಮೌಲ್ಯ ಅರಿಯದ ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಹೆತ್ತವರನ್ನೆ ವೃದ್ಧಾಶ್ರಮಕ್ಕೆ ಕಳುಹಿಸಲು ಮುಂದಾಗುತ್ತಾರೆ.  ಆದ್ದರಿಂದ ಮಕ್ಕಳಿಗೆ ಪೋಷಕರ ಸರಿಯಾದ ಮಾರ್ಗದರ್ಶನ ಅತೀ ಅವಶ್ಯಕ. ಮಕ್ಕಳ ಮೇಲಿನ ಪ್ರೀತಿ ಅವರ ಭವಿಷ್ಯವನ್ನು ನಿರ್ಧರಿಸುವಂತಿರಬೇಕು, ಅಲ್ಲದೆ ಅವರನ್ನು ಪ್ರತಿ ಹಂತದಲ್ಲೂ ತಿದ್ದುವಂತಿರಬೇಕು.

ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಶೆಟ್ಟಿ ಪ್ರಾಸ್ತವಿಕ ನುಡಿಗಳನ್ನಾಡಿ ‘ಪದವಿ ಎನ್ನುವುದು ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರಿಸುವ ಅಂತಿಮಘಟ್ಟ. ಪೋಷಕರು ಈ ಸಮಯದಲ್ಲಿ ಮಕ್ಕಳ ಬಗ್ಗೆ ಗಮನ ಹರಿಸಬೇಕು. ಹೆಚ್ಚಿನ ಪೋಷಕರು ತಮ್ಮ ಮಕ್ಕಳು ಹೈಸ್ಕೂಲ್,ಪಿ.ಯು.ಸಿ ನಂತರ ಶಿಕ್ಷಣದ ಬಗ್ಗೆ ಗಮನ ಕೊಡುವುದಿಲ್ಲ. ಮಕ್ಕಳು ಬೆಳೆದಿದ್ದಾರೆ ಇನ್ನೂ ನಾವು ಗಮನಹರಿಸುವ ಅವ್ಯಶಕವಿಲ್ಲ ಎಂದು ನಿರ್ಧರಿಸುತ್ತಾರೆ. ಆದರೆ ಇಂತಹ ಕಲ್ಪನೆ ತಪ್ಪು. ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ  ಪೋಷಕರ ಮತ್ತು ಶಿಕ್ಷಕರ ನಡುವೆ ನಿರಂತರ ಸಂಪರ್ಕ ಅಗತ್ಯ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ರಂಗದಲ್ಲಿ ಶೇ ೯೦ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಐಪಿಸಿಸಿ, ಸಿಪಿಟಿ ಮತ್ತು ಸಿಎಸ್‌ನಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು  ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಕೆ.ಉಮೇಶ್ ಶೆಟ್ಟಿ, ಶಿಕ್ಷಕ-ರಕ್ಷಕ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಮಹಾವೀರಜೈನ್ ಮತ್ತು ವಾಣಿಜ್ಯ ವಿಭಾಗ ಉಪನ್ಯಾಸಕಿ ಶರ್ಮಿಳ ಕುಂದಾರ್ ಉಪಸ್ಥಿತರಿದ್ದರು.

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.