ವಿದ್ಯಾಗಿರಿ: ಸಿನಿಮಾಗಳು ಸಮಾಜದ ಅತೀ ಮುಖ್ಯ ಸಂವಹನ ಮಾಧ್ಯಮ. ಆದ್ದರಿಂದ ಸಿನಿಮಾಗಳಲ್ಲಿ ಗಾಂಧಿ ತತ್ವಗಳನ್ನು ಅಳವಡಿಸಿಕೊಂಡಾಗ ಸಮಾಜಕ್ಕೆ ಮೌಲ್ಯಾಧಾರಿತ ಸಂದೇಶಗಳನ್ನು ನೀಡಲು ಸಾಧ್ಯ ಎಂದು ಎಸ್.ಡಿ.ಎಮ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಹಪ್ರಾಧ್ಯಾಪಕರಾದ ಡಾ. ಎನ್.ಕೆ ಪದ್ಮನಾಭ್ ಹೇಳಿದರು.
ಇವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ʻಅಭಿವ್ಯಕ್ತಿʻ ವೇದಿಕೆಯಡಿಯಲ್ಲಿ ನಡೆದ ʻಪ್ಲೇ ಬಟನ್ʻ ಶಾರ್ಟ್ ಫಿಲ್ಮ್ ಫೆಸ್ಟಿವಲ್ -2019ನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮುಖ್ಯವಾಹಿನಿಯ ವಾಣಿಜ್ಯ ಸಿನಿಮಾಗಳಲ್ಲಿ ಗಾಂಧೀಜಿಯ ತತ್ವಗಳು ಮರೆಯಾಗಿದ್ದು, ಅದು ಕೇವಲ ಕಿರುಚಿತ್ರ ಹಾಗೂ ಕಲಾಚಿತ್ರಗಳಿಗೆ ಸೀಮಿತವಾಗಿವೆ. ಆದರೆ ಗಾಂಧಿ ತತ್ವಗಳು ಎಲ್ಲ ಕಾಲಕ್ಕೂ ಸಲ್ಲುವಂತದ್ದು. ಆದ್ದರಿಂದ ಸಿನಿಮಾಗಳನ್ನು ನಿರ್ಮಿಸುವ ಮೊದಲು ಗಾಂಧೀಜಿ ಹಾಗೂ ಟಾಲ್‍ಸ್ಟಾಯ್‍ರಂತಹ ತತ್ವಜ್ಞಾನಿಗಳನ್ನು ಸರಿಯಾಗಿ ಅರಿತುಕೊಳ್ಳುವುದು ಮುಖ್ಯ. ಭವಿಷ್ಯದಲ್ಲಿ ನಿರ್ಮಾಣವಾಗುವ ಸಿನಿಮಾಗಳು ಇಂತಹ ತತ್ವಗಳನ್ನು ಅನುಸರಿಸಿದರೆ ಮಾತ್ರ ಈ ಸಮಾಜ ಶಾಂತಿ ಹಾಗೂ ನೆಮ್ಮದಿಯ ಪಥದಲ್ಲಿ ಸಾಗುತ್ತದೆ ಎಂದರು.
ಸಿನಿಮಾ ಫೆಸ್ಟಿವಲ್‍ನಲ್ಲಿ ಗಾಂಧೀಜಿಯ ತತ್ವಗಳನ್ನು ಬಿಂಬಿಸುವಂತಹ ನೂರು ರೂಪಾಯಿ, ದ ಅದರ್ ಪೇರ್, ಹ್ಯೂಮನ್-ನೇಚರ್, ಸ್ಟೋರಿ ಆಫ್ ಫಾರ್ಮರ್ ಕಿರುಚಿತ್ರಗಳನ್ನು ಪ್ರದರ್ಶಿಸಿ, ಅವುಗಳ ಕುರಿತು ಸಂಪನ್ಮೂಲಗಳೊಡೊನೆ ವಿದ್ಯಾರ್ಥಿಗಳು ಸಂವಾದ ನಡೆಸಿದರು.
ಕಾರ್ಯಕ್ರಮದಲ್ಲಿ ವಿಭಾಗ ಸಂಯೋಜಕರಾದ ಶ್ರೀನಿವಾಸ್ ಪೆಜತ್ತಾಯ, ಉಪನ್ಯಾಸಕಿ ಶ್ರೀಗೌರಿ ಜೋಶಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕಿ ವಿದ್ಯಾರ್ಥಿನಿ ಶ್ರೀರಕ್ಷಾ ಶಿರ್ಲಾಲ್ ಕಾರ್ಯಕ್ರಮ ನಿರೂಪಿಸಿದರು.
- ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಲಿಕೆಯ ಹಿನ್ನಲೆಯಲ್ಲಿ ನೀಡಿದ ಕಾರ್ಯ ಯೋಜನೆ
- ವಿದ್ಯಾರ್ಥಿಗಳೇ ಸಂಯೋಜಕರಾಗಿ ಆಯೋಜಿಸಿದ ಕಾರ್ಯಕ್ರಮ
- ಒಂದಲ್ಲ ಒಂದು ಗಾಂಧಿ ತತ್ವವನ್ನು ಪಾಲಿಸುತ್ತವೆ ಎಂದು ವಿದ್ಯಾರ್ಥಿಗಳಿಂದ ಪ್ರಮಾಣ ವಚನ