ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರ
ತುಳು ದ್ರಾವಿಡ ಭಾಷಾ ಪರಿವಾರದ ಭಾಷೆಯಾಗಿದೆ. ಇದು ಮೂಲ ದ್ರಾವಿಡರಿಂದ ಮೊತ್ತ ಮೊದಲು ಕವಲೊಡೆದ ಭಾಷೆ. ಸ್ವತಂತ್ರ ಭಾಷೆಯಾಗಿ ಬೆಳೆದಿರುವ ತುಳುವನ್ನು ದ್ರಾವಿಡ ಭಾಷೆಗಳಲ್ಲೇ ಪೌಢಭಾಷೆ ಎಂಬುದಾಗಿ ಭಾಷಾ ವಿದ್ವಾಂಸ ರಾಬರ್ಟ್ ಕಾಲ್ಡ್‍ವೆಲ್ ಗುರುತಿಸಿದ್ದಾರೆ. ಉತ್ತರದಲ್ಲಿ ಉಡುಪಿ ಜಿಲ್ಲೆಯ ಕಲ್ಯಾಣಪುರ ಹೊಳೆ, ಪಶ್ಚಿಮದಲ್ಲಿ ಕಾಸರಗೋಡು ತಾಲೂಕಿನ ಚಂದ್ರಗಿರಿ ಹೊಳೆಯ ತನಕ ತುಳು ಭಾಷೆ ಪ್ರಚಲಿತದಲ್ಲಿದೆ. ಶಾಸನಗಳಲ್ಲಿ ಹಾಗೂ ಯುರೋಪ್ ಪ್ರವಾಸ ಕಥನಗಳಲ್ಲಿ ಉಲ್ಲೇಖಗೊಂಡ ಪ್ರಕಾರ ಉತ್ತರ ಕನ್ನಡದ ಗೋಕರ್ಣ ಮತ್ತು ಗೇರುಸೊಪ್ಪೆಯವರೆಗೆ ತುಳುನಾಡು ವಿಸ್ತಾರವಾಗಿತ್ತು. ತುಳುನಾಡು ಬಹುಭಾಷಿಕ ಪ್ರದೇಶವಾಗಿದ್ದರೂ ಮನೆ ಮಾತಾಗಿ, ವ್ಯವಹಾರದ ಭಾಷೆಯಾಗಿ ತುಳುವನ್ನು ಬಹುತೇಕ ಎಲ್ಲರೂ ಬಳಸುತ್ತಾರೆ. ತಮಿಳಿನ ಸಂಗಂ ಸಾಹಿತ್ಯದಲ್ಲಿಯೂ ತುಳುವಿನ ಉಲ್ಲೇಖವಿದೆ.
ತುಳುನಾಡಿನ ಜನಪದ ಸಾಹಿತ್ಯ ಹಾಗೂ ಆರಾಧನಾ ಪರಂಪರೆ ಸಮೃದ್ಧವಾಗಿದೆ. ಈ ಕುರಿತು ಸಾಕಷ್ಟು ಅಧ್ಯಯನಗಳು ನಡೆದಿವೆ. ತುಳುವಿಗೆ ಸ್ವಂತ ಲಿಪಿ ಇದ್ದರೂ ಅದು ಸಾಕಷ್ಟು ಜನಪ್ರಿಯವಾಗಿಲ್ಲ. ತುಳು ಭಾಷೆಯ ಬರಹವನ್ನು ಕನ್ನಡ ಅಕ್ಷರದಲ್ಲಿಯೇ ಹೆಚ್ಚಾಗಿ ಬರೆಯಲಾಗುತ್ತದೆ. ಆದರೂ ಶ್ರೀ ಭಾಗವತೋ, ಕಾವೇರಿ, ದೇವಿ ಮಹಾತ್ಮೆ ಹಾಗೂ ಮಹಾಭಾರತೊ ಕೃತಿಗಳು ತುಳು ಲಿಪಿಯಲ್ಲೇ ರಚನೆಗೊಂಡಿರುವುದು ಗಮನಾರ್ಹ.
ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಆಳ್ವಾಸ್ ತುಳು ಸಂಸ್ಕೃತಿ ಅಧ್ಯಯನ ಕೇಂದ್ರವು ತುಳು ಭಾಷೆ ಮತ್ತು ಸಂಸ್ಕøತಿಯ ಕುರಿತು ಅರಿವು ಮೂಡಿಸುವ ಕಾರ್ಯವನ್ನು ನಿರ್ವಹಿಸುತ್ತಿದೆ. ತುಳುವಿನ ವಿವಿಧ ಆಯಾಮಗಳಿಗೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ, ಕಮ್ಮಟ, ವಿಚಾರ ಸಂಕಿರಣಗಳನ್ನು ನಿರ್ವಹಿಸಿಕೊಂಡು ಬರುತ್ತಿವೆ. ತುಳುವಿಗೆ ಸಂಬಂಧಿಸಿದ ಕಲಾಭಿವೃದ್ಧಿಗೆ ‘ತುಳುರಂಗ್’ ಎಂಬ ಕಾರ್ಯಕ್ರಮವನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತಿವೆ. ತುಳು ಪಾಡ್ದನಗಳ ದಾಖಲಾತಿ, ಜಾನಪದ ಕಲಾವಿದರ ಮಾಹಿತಿ ಸಂಗ್ರಹ ಮುಂತಾದ ಕಾರ್ಯ ನಡೆಸಿಯುತ್ತಿದೆ. ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಬರೆದ ಬರಹವನ್ನು ಕೃತಿ ರೂಪಕ್ಕೆ ತರುವ ಇಚ್ಛೆ ಕೇಂದ್ರಕ್ಕಿದೆ. ವಿವಿಧ ಕಾಲೇಜುಗಳು ತುಳುವಿಗೆ ಸಂಬಂಧಿಸಿದ ಸ್ಪರ್ಧೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಕಾರ್ಯ ಕೇಂದ್ರ ಮೂಲಕ ನಡೆಯುತ್ತಿದೆ. ಪ್ರತಿ ಶನಿವಾರ ಒಂದುವರೆ ಗಂಟೆಗಳ ಕಾಲ ತುಳುವಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತದೆ.