ಮೂಡುಬಿದಿರೆ: ಎನ್ ಸಿ.ಸಿ ಯಲ್ಲಿ ದೊರೆತಂತಹ ಶಿಕ್ಷಣವನ್ನು ಮಕ್ಕಳು ಎಂದಿಗೂ ಮರೆಯದೆ ತಮ್ಮ ಜೀವನದುದ್ದಕ್ಕೂ ಅನುಸರಿಸಬೇಕು ಆಗ ಉತ್ತಮ ನಾಗರೀಕನಾಗಿ ಬೆಳೆಯಲು ಸಾಧ್ಯ ಎಂದು ಕ್ಯಾಂಪ್ ಕಮಾಂಡೆಂಟ್ ಕರ್ನಲ್ ಬದ್ರಿಪ್ರಸಾದ್ ಹೇಳಿದರು
ವಿದ್ಯಾಗಿರಿಯ ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದ ಆಳ್ವಾಸ್ ಕಾಲೇಜಿನ ಎನ್.ಸಿ.ಸಿ ವಿಭಾಗದಿಂದ ಆಯೋಜಿಸಲಾದ 21 ಕರ್ನಾಟಕ ಬಿ.ಎನ್.ಸಿ.ಸಿ ಉಡುಪಿ ಇದರ ಹತ್ತು ದಿನಗಳ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ವಿದ್ಯಾಗಿರಿ ಆವರಣದಲ್ಲಿ ಈ ಬಾರಿ ನಡೆಯುತ್ತಿರುವ ಮೂರನೆ ಕ್ಯಾಂಪ್ ಇದಾಗಿದ್ದು, ವಿದ್ಯಾರ್ಥಿಗಳು ಇಲ್ಲಿ ಕಲಿತ ಶಿಸ್ತು, ಸೌಹಾರ್ಧಯುತ ಬಾಳ್ವೆ, ನೀತಿ ಪಾಠ ಎಲ್ಲವನ್ನು ಮರೆಯದೆ ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು. ಕಲಿಯುವಂತಹ ವಿದ್ಯಾರ್ಥಿಗಳು ಉತ್ತಮ ರೀತಿಯ ಅವಕಾಶವಾದಿಗಳಾಗಿರಬೇಕು. ನನ್ನಿಂದ ಅಸಾಧ್ಯ ಎನ್ನುವಂತಹ ಮನೋಭಾವವನ್ನು ಇಂದೇ ತ್ಯಜಿಸಿ ಎಲ್ಲವನ್ನು ಎದುರಿಸಿ ಗೆಲ್ಲುವ ಧೈರ್ಯ ಬೆಳಸಿಕೊಳ್ಳಬೇಕು ಎಂದರು. ಮಾನಸಿಕವಾಗಿ ಹಾಗೂ ದೈಹಿಕವಾಗಿ ಪ್ರತಿ ಸುಖ,ದುಃಖವನ್ನು ಸಂಪೂರ್ಣವಾಗಿ ಅನುಭವಿಸಬೇಕು ಆಗ ಮಾತ್ರ ಜೀವನದ ಸವಿಯನ್ನು ತೀಲಿಯಲು ಸಾಧ್ಯ ಎಂದು ಹೇಳಿದರು.
ಇದೇ ಸಮಯದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ‘’ಇಡೀ ಜಗತ್ತೇ ಇಂದು ಸಣ್ಣ ಹಳ್ಳಿ ಇದ್ದಂತೆ. ಹಾಗಾಗಿ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಕ್ಲಾಸ್ ರೂಂ ಶಿಕ್ಷಣ ಮಾತ್ರ ಸಲಾದು, ಇದರೊಂದಿಗೆ ಬಯಲು ಶಿಕ್ಷಣ ಎನ್ನುವುದು ಪ್ರತಿಯೊಂದು ಮಗುವಿಗೆ ಬೇಕೆ ಬೇಕು. ಮಕ್ಕಳು ಬಾಲ್ಯದಿಂದಲೇ ತಮ್ಮ ತಮ್ಮ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು. ಅಲ್ಲದೆ ಒಬ್ಬ ಪರಿಪೂರ್ಣ ವ್ಯಕ್ತಿಯಾಗಲು ಶಿಕ್ಷಣದೊಂದಿಗೆ ಕ್ರೀಡೆ ಮತ್ತು ಸಾಂಸ್ಕøತಿಕ ನೆಲೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಕೊನೆಯಲ್ಲಿ ಎನ್ ಸಿ.ಸಿ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಕೆಡೆಟ್ ಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವೇದಿಕೆಯಲ್ಲಿ ಮೇಜರ್ ಪ್ರಕಾಶ್ ರಾವ್ ಉಪಸ್ಥಿತಿ ಇದ್ದರು.