ಭವ್ಯ ಭಾರತದ ನಿರ್ಮಾಣದಲ್ಲಿ ಯುವ ಸಮುದಾಯ ಪ್ರಮುಖ ಪಾತ್ರವಹಿಸುತ್ತದೆ: ವಿಲಾಸ್ ನಾಯಕ್

ಮೂಡಬಿದ್ರೆ: ಜೀವನದಲ್ಲಿ ಅಭಿವೃದ್ಧಿಯುತ ಚಿಂತನೆ ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳುವುದರಿಂದ  ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಬಹುದು ಎಂದು ಹನುಮಾನ್ ಗ್ರೂಪ್ ಆಫ್ ಕನ್ಸರ್ನ್ಸ್ ಮತ್ತು ಸ್ಪಂದನಾ ಟಿ.ವಿಯ ಆಡಳಿತ ನಿರ್ದೇಶಕ  ವಿಲಾಸ್ ನಾಯಕ್ ಹೇಳಿದರು.

ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯ  ಆಳ್ವಾಸ್ ಫಿಸಿಯೋಥರಪಿ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ಮತ್ತು ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಒರಿಯೆಂಟೇಶನ್ ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇಂದಿನ ಔಪಚಾರಿಕ ಶಿಕ್ಷಣ ಪದವಿಗಳನ್ನು ನೀಡುತ್ತದೆಯೇ ಹೊರತು ವ್ಯಕ್ತಿತ್ತ್ವವನ್ನಲ್ಲ.  ಆದರೆ ಒಬ್ಬ ವ್ಯಕ್ತಿಯ ಜೀವನದಲ್ಲಿ ವಕ್ತಿತ್ವ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ.  ನಮ್ಮ ಶಿಕ್ಷಣ ಪದ್ಧತಿಯು ಜೀವನದ ಶೇ.೨೦ರಷ್ಟು ಭಾಗವನ್ನು ರೂಪಿಸಿದರೆ, ಉಳಿದ ಶೇ.೮೦ರಷ್ಟು ಭಾಗವನ್ನು ಅನೌಪಚಾರಿಕ ಶಿಕ್ಷಣವು ರೂಪಿಸುತ್ತದೆ. ಅವಕಾಶಗಳು ನಮ್ಮಲ್ಲಿರುವ ಸೃಜನಾತ್ಮಕ ಚಿಂತನೆಗಳನ್ನು ಮತ್ತು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಭವ್ಯ ಭಾರತದ ನಿರ್ಮಾಣದಲ್ಲಿ ಯುವ ಸಮುದಾಯ ಪ್ರಮುಖ ಪಾತ್ರವಹಿಸುವುದರಿಂದ, ವಿದ್ಯಾರ್ಥಿಗಳು ಈ ಕ್ಷಣದಿಂದಲೇ ದೇಶ ನಿರ್ಮಾಣದ ಕಾರ್‍ಯದಲ್ಲಿ ತೊಡಗಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ವಿದ್ಯಾರ್ಥಿಗಳು ತಾವು ಆಯ್ದುಕೊಂಡ ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಅವುಗಳಿಗೆ ತಕ್ಕುದಾದ ನ್ಯಾಯ ಒದಗಿಸಬೇಕು. ಪ್ರತಿಯೊಬ್ಬರು ಜೀವನದಲ್ಲಿ ಔಪಚಾರಿಕ ಜ್ಞಾನದ ಜೊತೆಗೆ ಪ್ರಾಯೋಗಿಕ ಜ್ಞಾನವನ್ನು ಬೆಳೆಸಿಕೊಂಡಿರಬೇಕು. ಯಾವುದೇ ವಿಷಯದ ಬಗ್ಗೆ ಮೂಲ ಜ್ಞಾನವನ್ನು ಸಂಪಾದಿಸಿಕೊಂಡು, ಅರ್ಥೈಸಿಕೊಳ್ಳುವುದು ಅಗತ್ಯ. ಕೀಳರಿಮೆಯನ್ನು ಹೋಗಲಾಡಿಸಿ, ಪ್ರತಿಯೊಂದನ್ನು ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಂಡರೆ ಬದುಕಿನ ಗುರಿಯನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗಲೇ ನಿಜವಾದ ಶಿಕ್ಷಣದ ಧ್ಯೇಯ ಈಡೇರಿದಂತೆ  ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ “ಆಳ್ವಾಸ್ ಇನ್‌ಸ್ಪೈರಿಯಾ- ೨೦೧೮” ಶೈಕ್ಷಣಿಕ ವಾರ್ಷಿಕಾಂಕವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ವಿಭಾಗಗಳ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಸೌಮ್ಯಾ ಶೆಣೈ ವಂದಿಸಿ, ವಿದ್ಯಾರ್ಥಿನಿ ಅನುಷಾ ಶೆಟ್ಟಿ ಸ್ವಾಗತಿಸಿ, ನಿಶಾ ಭಂಡಾರಿ ನಿರೂಪಿಸಿದರು.


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.