ಮಾನವೀಯ ಮೌಲ್ಯಗಳಿಂದ ಮನುಷ್ಯ ಶಾಂತಿ ನೆಮ್ಮದಿಯ ಬದುಕನ್ನು ಸಾಗಿಸಬಹುದು ಎಂದು ಜಗತ್ತಿಗೆ ಸಾರಿದ ಮಹಾನ್ ಕವಿ ರತ್ನಾಕರವರ್ಣಿ

ಮೂಡಬಿದಿರೆ: ಮಾನವೀಯ ಮೌಲ್ಯಗಳಿಂದ ಮನುಷ್ಯ ಶಾಂತಿ ನೆಮ್ಮದಿಯ ಬದುಕನ್ನು ಸಾಗಿಸಬಹುದು ಎಂದು ಜಗತ್ತಿಗೆ ಸಾರಿದ ಮಹಾನ್ ಕವಿ ರತ್ನಾಕರವರ್ಣಿ ಎಂದು ಖ್ಯಾತ ವಿಮರ್ಶಕ ಎಚ್ ದಂಡಪ್ಪ ಹೇಳಿದರು.ಅವರು  ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠ, ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ  ನಡೆದ ಒಂದು ದಿನದ ‘ರತ್ನಾಕರವರ್ಣಿಯ ಭರತೇಶ ವೈಭವ’ ರಾಜ್ಯಮಟ್ಟದ ವಿಚಾರ ಸಂಕಿರಣ ವನ್ನು ಉದ್ಘಾಟಿಸಿ ಮಾತನಾಡಿದರು.

ರತ್ನಾಕರವರ್ಣಿ ತನ್ನ ಭರತೇಶ ವೈಭವದಿಂದ ಸಾಹಿತ್ಯಲೋಕದಲ್ಲಿ ಅದ್ವಿತೀಯ ಕವಿಯಾಗಿ ಕಂಗೊಳಿಸಲು ಸಾಧ್ಯವಾಯಿತು. ಸುಮಾರು ೮೪ ಸಂಧಿಗಳು ಹಾಗೂ ಹತ್ತು ಸಾವಿರಕ್ಕೂ ಹೆಚ್ಚಿನ ಪದ್ಯಗಳನ್ನು ಒಳಗೊಂಡ ಮಹಾನ್‌ಕೃತಿ ‘ಭರತೇಶ ವೈಭವ’. ಈ ಕೃತಿ ಕಲಾತ್ಮಕವಾಗಿರುವಂತಹ ಅನುಭವದ ಅಭಿವ್ಯಕ್ತಿ. ಅರ್ಥಶಾಸ್ತ್ರ, ವಿಜ್ಞಾನ, ತಂತ್ರಜ್ಞಾನ, ಸಂಸ್ಕೃತಿ ಎಲ್ಲವನ್ನು ತನ್ನೊಡಲೊಳಗೆ ತುಂಬಿಸಿಕೊಂಡಿರುವ ಶೃಂಗಾರ ಕೃತಿ.

ಇಂದಿನ ಯುವಜನತೆ ಸಾಹಿತ್ಯದೆಡೆಗೆ ನಿರಾಸಕ್ತಿ ತೋರುತ್ತಿದ್ದಾರೆ. ಸಾಹಿತ್ಯ ಓದುವುದರಿಂದ ಶಾಂತಿ ನೆಮ್ಮದಿಯ ಬದುಕನ್ನು ನಮ್ಮದಾಗಿಸಿಕೂಳ್ಳಬಹುದು. ಮಾನವ ಮತ್ತು ನಿಸರ್ಗದ ಎಲ್ಲ ಕೊರತೆಗಳನ್ನು ಸಾಹಿತ್ಯ ನೀಗಿಸಬಲ್ಲದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಮಂಗಳೂರು ವಿದ್ಯಾನಿಲಯದ ಕುಲ ಸಚಿವ ಪ್ರೋ ಎ.ಎಮ್ ಖಾನ್  ”ಸಾಹಿತ್ಯ ಬರಿ ಭಾಷೆಗಳಿಗೆ ಸೀಮಿತವಾಗಿಲ್ಲ. ಎಲ್ಲಾ ಜ್ಞಾನ ಶಾಖೆಗಳ ಸಮ್ಮಿಲನ. ಪ್ರತಿಯೊಬ್ಬ ವಿದ್ಯಾರ್ಥಿಯು ಸಾಹಿತ್ಯ ಪ್ರೇಮಿಯಾಗುವುದರಿಂದ ನಮ್ಮಲ್ಲಿ ಹೊಸ ಹೊಳವುಗಳು ಮೂಡಲು ಸಹಕಾರಿ ಎಂದರು.

 

ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಮಾತನಾಡಿ, ಮಹಾನ್ ಕವಿ ರತ್ನಾಕರವರ್ಣಿ ಮೂಲತಃ ಮೂಡುಬಿದರೆಯವರೆ ಎಂಬುದು ನಮಗೆಲ್ಲರಿಗೂ  ಹೆಮ್ಮೆಯ ಸಂಗತಿ. ರತ್ನಾಕರವರ್ಣಿ ಎಂದೂ ಸಂಪ್ರದಾಯದ ಬದುಕಿಗೆ ಒಪ್ಪಿಕೊಂಡವರಲ್ಲಾ, ಅವರ ಕಾವ್ಯಗಳಲ್ಲಿ ವರ್ಣನೆಗೆ ಇತಿಮಿತಿ ಇರುತಿತ್ತು. ೧೬ನೇ ಶತಮಾನದ ಅವರ ಸಾಹಿತ್ಯ ಈ ಕಾಲದಲ್ಲೂ ಎಷ್ಟು ಪ್ರಸ್ತುತ ಎಂಬುದರ ಚಿಂತನ ಮಂಥನ ಈ ಕಾರ್‍ಯಕ್ರಮದಿಂದ ನೆರೆವೇರಲಿ ಎಂದರು.

 

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಪಕ ಡಾ ಮಾಧವ ಪೆರಾಜೆ, ”ಭರತೇಶ ವೈಭವ ಮತ್ತು ಪೂರ್ವಪುರಾಣ”, ಮದರಾಸು ವಿಶ್ವವಿದ್ಯಾನಿಲಯ, ಸಹಾಯಕ ಪ್ರಾದ್ಯಾಪಕ ಡಾ. ಎಮ್ ರಂಗಸ್ವಾಮಿ ‘ಚಿಂತೆಯೇ ಮುಪ್ಪು ಸಂತೋಷವೇ ಜವ್ವನ’,  ಮುನಿರಾಜು ರೆಂಜಾಳ, ‘ಭರತೇಶ ವೈಭವದಲ್ಲಿ ಸಾಮಾಜಿಕ ಸಂದೇಶ’., ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಸಹ ಪ್ರಾದ್ಯಾಪಕ ಡಾ. ನಾಗಾರ್ಜುನ್ ಎಚ್ ಎಮ್, ‘ಭರತೇಶ ವೈಭವ: ಜೈನ ತತ್ವದ ನಿಲುವು’.  ಹಾಗೂ ಎಚ್ ದಂಡಪ್ಪ ‘ಭರತೇಶ ವೈಭವ ಮತ್ತು ಪ್ರಭುತ್ವದ ನೆಲೆಗಳು’ ಎಂಬ ವಿಷಯಗಳ ಕುರಿತು ವಿಚಾರ ಮಂಡಿಸಿದರು.

ಕಾರ್‍ಯಕ್ರಮವನ್ನು ವೈಷ್ಣವಿ ನಿರೂಪಿಸಿ, ಮಂಗಳೂರು ವಿಶ್ವವಿದ್ಯಾನಿಲಯದ ಮಹಾಕವಿ ರತ್ನಾಕರವರ್ಣಿ ಅಧ್ಯಯನ ಪೀಠದ ಸಂಯೋಜಕ ಪ್ರೋ ಸೋಮಣ್ಣ ಸ್ವಾಗತಿಸಿ, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಪ್ರೋ. ಚಂದ್ರಶೇಖರ್ ಗೌಡ ವಂದಿಸಿದರು.

ಕ್ರಾರ್‍ಯಕ್ರಮದ ಸಂಯೋಜಕರಾದ ಡಾ ಯೋಗೀಶ್ ಕೈರೋಡಿ, ಡಾ ಕೃಷ್ಣರಾಜ್ ಕರಬ ಉಪಸ್ಥಿತರಿದ್ದರು.

 


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.